ದಲಿತ ಸಾಹಿತ್ಯ

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ದಲಿತ ಸಾಹಿತ್ಯಕ್ಕೆ ಒಂದು ವಿಶಿಷ್ಟ ಸ್ಥಾನವಿದೆ. ವಿಶಿಷ್ಟ ಧ್ವನಿ ಇದೆ. ಕರ್ನಾಟಕದಲ್ಲಿ ದಲಿತ ಪದ ಬಳಕೆಗೆ ಬರಲು ಮೂಲ ಪ್ರೇರಣೆ ಮಹಾರಾಷ್ಟ್ರದ ದಲಿತ ಚಳವಳಿ. ಬುದ್ದಣ್ಣ ಹಿಂಗಮಿರೆ ಮತ್ತಿತರರು ಸೇರಿ 1973ರಲ್ಲಿ ದಲಿತ ಪತ್ರಿಕೆ ಪ್ರಾರಂಭಿಸಿದರು. ಮುಂದೆ ಪ್ರಗತಿ ಪಂಥದಲ್ಲಿ ಒಂದು ಅಂಗವಾಗಿ `ದಲಿತ ಪಂಥ ಕಾಣಿಸಿಕೊಂಡಿತು. ಇದಕ್ಕೆ ಮೂಲ ಕಾರಣ ಬಿ.ಬಸವಲಿಂಗಪ್ಪನವರ 'ಬೂಸಾ ಪ್ರಕರಣ' ಅನಂತರ 1974-75ರ ವೇಳೆಗೆ ಬಿ.ಕೃಷ್ಣಪ್ಪನವರ ನೇತೃತ್ವದಲ್ಲಿ 'ದಲಿತ ಸಂಘರ್ಷದ ಸಮಿತಿ ರೂಪುಗೊಂಡು' 1976ರಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮೈತಳೆಯಿತು. ಇದೇ ಸಂದರ್ಭದಲ್ಲಿ ರೂಪುಗೊಂಡ `ದಲಿತ ಲೇಖಕರ ಮತ್ತು ಕಲಾವಿದರ ಒಕ್ಕೂಟ ದಲಿತ ಸಂಘರ್ಷ ಸಮಿತಿಯೊಂದಿಗೆ ಒಗ್ಗೂಡಿ ಹಲವಾರು ಕಾರ್ಯಕ್ರಮ, ಜಾಥಾಗಳ ಮೂಲಕ, `ಪಂಚಮ ಪತ್ರಿಕೆಯ ಮೂಲಕ ಎಲ್ಲರ ಗಮನ ದಲಿತದ ಕಡೆಗೆ ಸೆಳೆಯುವಂತೆ ಮಾಡಿತು.

	ದಲಿತ ಸಾಹಿತ್ಯವನ್ನು ಗಮನಿಸುವಾಗ `ದಲಿತ `ದಲಿತರು, `ದಲಿತ ಪ್ರಜೆ ಮೊದಲಾದ ತಾತ್ವಿಕ ಪರಿಕಲ್ಪನೆಗಳ ಸ್ಪಷ್ಟ ಅರಿವು ಅಗತ್ಯವೆನಿಸುತ್ತದೆ. ವಿದ್ವಾಂಸರ ಪ್ರಕಾರ 1943ರಲ್ಲಿ ಕಾಣಿಸಿಕೊಂಡ ಪ್ರಗತಿಶೀಲ ಚಳವಳಿ 1975ರಲ್ಲಿ ಮತ್ತೆ `ಪ್ರಗತಿ ಪಂಥ ಎಂಬ ಹೆಸರಿನಿಂದ ಕಾಣಿಸಿಕೊಂಡ ಸಂದರ್ಭದಲ್ಲಿ ದಲಿತ ಎಂಬ ಪದವೂ ಮೊದಲ ಬಾರಿಗೆ ಬಳಕೆಯಾಯಿತು. ದಲಿತ ಎಂಬ ಪದಕ್ಕೆ `ದಳ `ಗುಂಪು `ಸೈನ್ಯ `ಶೋಷಿತ, `ದಮನಕ್ಕೆ ಒಳಗಾದವರು ಎಂಬ ನಾನಾ ಅರ್ಥಗಳು ಶಬ್ದಕೋಶದಲ್ಲಿ ಇವೆ. ಭಾರತದಾದ್ಯಂತ ಅಸ್ಪøಶ್ಯತೆಗೆ ದಲಿತ ಎಂಬ ಪದವನ್ನು ಬಳಸಲಾಯಿತು. ಮೊದಲಿಗೆ ಅಂಬೇಡ್ಕರ್ `ಡಿಪ್ರೆಸ್ಡ್ ಎಂಬ ಪದವನ್ನು ಬಳಸಿದರು. ಮರಾಠಿ ಭಾಷೆಯಲ್ಲಿ ದಲಿತ ಪದಕ್ಕೆ ಬದಲಾಗಿ ಬೌದ್ಧ ಶಬ್ದವನ್ನು ಬಳಸುವ ಪ್ರಯತ್ನವೂ ನಡೆಯಿತು.

	ದಲಿತ ಎಂದರೆ ಯಾರು ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ವಿಭಿನ್ನವಾದಗಳಿಗೆ ಸಂಬಂಧಿಸಿದ ಚಿಂತಕರು ತಮ್ಮದೇ ಆದ ನೆಲೆಯಲ್ಲಿ ಇದನ್ನು ವ್ಯಾಖ್ಯಾನಿಸಿದ್ದಾರೆ. ಶೋಷಣೆ ಎಂಬ ಪದಕ್ಕೆ ಜಾತಿಭೇದವಿಲ್ಲದ ಆರ್ಥಿಕ, ಸಾಮಾಜಿಕ, ರಾಜಕೀಯ ರಂಗದಲ್ಲೆಲ್ಲ ಶೋಷಣೆಗೆ ಒಳಗಾದ ಎಲ್ಲ ಜನರೂ ದಲಿತರೆಂದು ಮಾಕ್ರ್ಸ್‍ವಾದಿಗಳು ವ್ಯಾಖ್ಯಾನಿಸಿದರೆ, ಪಂಚಮ ಅಥವಾ ಬಹಿಷ್ಕøತರು ಎಂದು ಕರೆಯಿಸಿಕೊಳ್ಳುವ ಅಸ್ಪೃಶ್ಯರೆಲ್ಲರೂ ದಲಿತರೆಂದು ಅಂಬೇಡ್ಕರ್‍ವಾದಿಗಳು ಪ್ರತಿಪಾದಿಸಿದ್ದಾರೆ. ಆದರೆ ಲೋಹಿಯಾವಾದಿಗಳು ಅಸ್ಪೃಶ್ಯರೂ ಸೇರಿದಂತೆ ಎಲ್ಲ ಆರ್ಥಿಕ, ಸಾಮಾಜಿಕ, ರಾಜಕೀಯ ರಂಗದಲ್ಲಿ ಶೋಷಣೆಗೊಳಗಾದ ಬಡವರೂ ದಲಿತರೇ ಎಂದು ಸಾರಿದರು. ಅರವಿಂದ ಮಾಲಗತ್ತಿಯವರು ಈ ಮೂರು ವ್ಯಾಖ್ಯಾನಗಳ ಅಂತಃಸತ್ವವನ್ನು ಒಳಗೊಂಡಂತೆ. ಶತಮಾನಗಳಿಂದ ಜನ ಸಮುದಾಯದಲ್ಲಿ ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕವಾಗಿ ಶೋಷಣೆಗೆ ಒಳಗಾದವರು ಒಟ್ಟು ಮನುಷ್ಯ ಸಮಾಜದಲ್ಲಿ ಬದುಕಲಾಗದೆ, ಕೀಳುವೃತ್ತಿಗೆ ಅವಲಂಬಿತರಾಗಿ ಹೆಸರು ಹೇಳಿಕೊಳ್ಳಲು ನಾಚಿಕೆಪಡುವ ಅಸ್ಪøಶ್ಯರು ದಲಿತರೆನ್ನಿಸಿಕೊಳ್ಳುತ್ತಾರೆ ಎಂದು ಪ್ರತಿಪಾದಿಸಿದ್ದನ್ನು ಹೆಚ್ಚು ವಿದ್ವಾಂಸರು ಮಾನ್ಯಮಾಡಿರುವುದು ಕಂಡುಬರುತ್ತದೆ.

	ಮೇಲಿನ ವ್ಯಾಖ್ಯಾನಕ್ಕೆ ಸಂಬಂಧಿಸಿದಂತೆ ದಲಿತರನ್ನು ಕುರಿತು ಯಾರೇ ಬರೆದರೂ ದಲಿತ ಸಾಹಿತ್ಯವಾಗುತ್ತದೆ ಎಂಬುದು ಒಂದು ವಾದವಾದರೆ, ದಲಿತರೇ ಬರೆದದ್ದು ದಲಿತ ಸಾಹಿತ್ಯವಾಗುತ್ತದೆ ಎನ್ನುವ ವಾದವೂ ಇದೆ. ಆದರೆ ಈ ವಾದಗಳನ್ನು ಸಮೀಕರಿಸಿ ಅಧ್ಯಯನಕ್ಕೆ ಹೆಚ್ಚು ಅನುಕೂಲಕರವಾಗಿ ವ್ಯಾಖ್ಯಾನಿಸಿದ ಸ್ವರೂಪ ಬಳಕೆಯಲ್ಲಿರುವುದು ಕಂಡುಬರುತ್ತದೆ.

	`ದಲಿತಪ್ರಜ್ಞೆ ಎಂದರೆ ಅದು ಮಾನವೀಯತೆಯನ್ನು ಮೆರೆಯುವ ಪ್ರಜ್ಞೆ, `ಮಾನವಪ್ರಜ್ಞೆ ಎಂದು ವಿವರಿಸಲಾಗಿದೆ. ಇದು ವ್ಯಕ್ತಿಗತವಲ್ಲ, ಸಮೂಹ ನಿಷ್ಠವಾದದ್ದು. ಸಮಾಜದ ಸಾಮಾಜಿಕ, ಆರ್ಥಿಕ, ರಾಜಕೀಯ ಮೊದಲಾದ ಎಲ್ಲ ಸ್ತರಗಳಲ್ಲಿಯೂ ದಲಿತರ ಮೇಲೆ ನಡೆದ, ನಡೆಯುವ, ನಡೆಯುತ್ತಿರುವ, ನಡೆಯಲಿರುವ ದೌರ್ಜನ್ಯ, ಶೋಷಣೆ ಇತ್ಯಾದಿಗಳ ಬಗೆಗಿನ ಅರಿವು ಅಥವಾ ಪ್ರಜ್ಞೆಯೇ ದಲಿತ ಪ್ರಜ್ಞೆ ಎನಿಸಿಕೊಳ್ಳುತ್ತದೆ. ದಲಿತ ಪ್ರಜ್ಞೆ ಇರಲೇಬೇಕು ಎಂದರೆ ಅಸ್ಪೃಶ್ಯತೆ, ದಾಸ್ಯ, ವಿಷಮತೆ,  ದುಃಖ ಇತ್ಯಾದಿಗಳನ್ನು, ಸನಾತನ ಮೌಲ್ಯಗಳನ್ನು, ವರ್ಣ ಹಾಗೂ ಜಾತಿ ಶ್ರೇಷ್ಠತೆಯನ್ನು ವಿರೋಧಿಸುವುದೆಲ್ಲ `ದಲಿತಪ್ರಜ್ಞೆ ಯಾಗುತ್ತದೆ.

	ಹೀಗೆ ದಲಿತ, ದಲಿತರು, ದಲಿತ ಪ್ರಜ್ಞೆ ಈ ಮೂರರ ಜಿಜ್ಞಾಸೆಯಿಂದ ದಲಿತಸಾಹಿತ್ಯವನ್ನು ಪ್ರವೇಶಿಸಿದಾಗ ದಲಿತಸಾಹಿತ್ಯ ಎಂದು ಯಾವುದನ್ನು ಕರೆಯಬೇಕೆಂಬ ವಿಚಾರದಲ್ಲಿಯೂ ಬಹಳಷ್ಟು ಚರ್ಚೆಗಳು ನಡೆದಿರುವುದು ಗಮನಕ್ಕೆ ಬರುತ್ತದೆ. ದಲಿತರು, ದಲಿತೇತರರು ದಲಿತ ಪ್ರಜ್ಞೆಯಿಂದ ದಲಿತರ ಕುರಿತು ಸೃಷ್ಟಿಸಿದ ಸಾಹಿತ್ಯವೇ ದಲಿತ ಸಾಹಿತ್ಯದ ಇದರಲ್ಲಿ ದಲಿತೀಯ ದಲಿತೇಯ ಮತ್ತು ಆಂಶಿಕ ಸಾಹಿತ್ಯವೂ ಒಳಗೊಳ್ಳುತ್ತದೆ. ದಲಿತರು ದಲಿತ ಪ್ರಜ್ಞೆ ಯಿಂದ ದಲಿತತ್ವದ ಕುರಿತು ಬರೆದ ಸಾಹಿತ್ಯ ದಲಿತೀಯ ಸಾಹಿತ್ಯವಾದರೆ, ದಲಿತೇತರರು ದಲಿತ ಪ್ರಜ್ಞೆಯಿಂದ ದಲಿತರನ್ನು ಕುರಿತು ಬರೆದ ಸಾಹಿತ್ಯವೇ ದಲಿತೇಯ ಅಥವಾ ಅದಲಿತೀಯ ಸಾಹಿತ್ಯವಾಗುತ್ತದೆಯೆ. ಸಾಹಿತ್ಯದಲ್ಲಿ ದಲಿತಸಾಹಿತ್ಯವೆಂದು ವರ್ಗೀಕರಿಸುವುದೇ ತಪ್ಪು ಎಂಬ ವಾದವೂ ಬಳಕೆಯಲ್ಲಿದೆ. ಮಾಲಗತ್ತಿಯವರು ಹೇಳುವಂತೆ ಅಸ್ಪೃಶ್ಯತೆಯ ಪರಿಕಲ್ಪನೆ ಏನಿದ್ದರೂ ಮನುಷ್ಯನಲ್ಲಿಯೇ ವಿನಾ ಸಾಹಿತ್ಯ ಭೂಮಿಕೆಗಲ್ಲ. ದಲಿತಸಾಹಿತ್ಯ ಜಾತಿವಾದಿ ಸಾಹಿತ್ಯವಲ್ಲ. ಇತರ ಸಾಹಿತ್ಯಕ ಪಂಥಗಳಂತೆ ಇದು ಕೂಡ ಒಂದು. ದಲಿತರೇ ಬರೆದದ್ದು ಸಾಹಿತ್ಯವಾಗುತ್ತದೆಂದು ನಂಬಿ ಹೊರಟಿದ್ದೇ ಆದರೆ ಸಾಹಿತ್ಯದಲ್ಲಿ ಮತ್ತೊದು ಅಸ್ಪೃಶ್ಯರ ಕೇರಿಯನ್ನು ಸೃಷ್ಟಿಸಿದಂತಾಗುತ್ತದೆ. ದಲಿತೇತರರು ಬರೆಯುವಾಗ ಸಾಹಿತ್ಯದಲ್ಲಿ ದಲಿತರೇ ಕೇಂದ್ರ ಬಿಂದುವಾಗಿರಬೇಕೆಂಬ ನಿರ್ಬಂಧವೇನೂ ಇಲ್ಲ.

	ಆರಂಭದ ದಲಿತ ಸಾಹಿತ್ಯದಲ್ಲಿ ಕವನಲೇಖನಗಳು ಬಿಡಿಬಿಡಿಯಾಗಿ ಕಂಡುಬಂದರೂ ದಲಿತ ಸಾಹಿತ್ಯದ ಅಧಿಕೃತ ಆರಂಭವನ್ನು 1975ರಲ್ಲಿ ಪ್ರಕಟವಾದ ಸಿದ್ಧಲಿಂಗಯ್ಯ ಅವರ 'ಹೊಲೆಮಾದಿಗರ ಹಾಡು' ಸಂಕಲನದಿಂದ ಗುರುತಿಸಲಾಗಿದೆ. ತೆಲುಗಿನಲ್ಲಿ 1972ರ ವೇಳೆಗೆ ಬಂದಿದ್ದ ಈ ನಿಟ್ಟಿನ ಕವನ ಸಂಕಲನಗಳು ಹಾಗೂ 1971ರಲ್ಲಿ ಹೊರಬಂದ ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹೊರತಂದ `ದಿಗಂಬರ ಕವನ ಸಂಕಲನ ಹಾಗೂ ಹಾ.ಮು. ಪಟೇಲರ `ಶೂದ್ರ (1972) ಈ ಎಲ್ಲದರ ಪ್ರಭಾವ 'ಹೊಲೆಮಾದಿಗರ ಹಾಡು' ಕೃತಿಗೆ ಪ್ರೇರಣೆ ನೀಡಿರಬಹುದಾದ ಸಾಧ್ಯತೆಗಳಿವೆ.

	ದಲಿತ ಸಾಹಿತ್ಯವನ್ನು ಸಮಗ್ರವಾಗಿ ತೆಗೆದುಕೊಂಡಾಗ ವರ್ಣ ಮತ್ತು ಜಾತಿವ್ಯವಸ್ಥೆಯ ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಯ ಅನ್ಯಾಯಗಳನ್ನು ಪ್ರಶ್ನಿಸುವುದು ಕೇಂದ್ರ ಭಾವವಾಗಿ ಕಾಣುತ್ತದೆ. ಆವೇಶ, ಆದ್ರತೆ, ವಿಡಂಬನ ಸ್ವರೂಪದ ಅಭಿವ್ಯಕ್ತಿಯೇ ಕೇಂದ್ರವಾಗಿದ್ದು, ಪರಂಪರಾಗತ ಮೌಢ್ಯದ ಮೌಲ್ಯಗಳನ್ನು ಅನಾದರಣೆಯಿಂದ ಕಾಣುವುದು ಕಂಡುಬರುತ್ತದೆ. ದಲಿತ ಸಾಹಿತ್ಯ ಆರಂಭದ ವಸ್ತುನಿಷ್ಠತೆಯ ಕಡೆಯಿಂದ ಸಮಷ್ಟಿಯ ಕಡೆಗೆ ಹೆಜ್ಜೆ ಹಾಕುತ್ತಿರುವುದನ್ನು ಸದ್ಯದಲ್ಲಿ ಗುರುತಿಸಬಹುದು.          

	ಯಾವುದೇ ಸಾಹಿತ್ಯಪರಂಪರೆ ತನ್ನ ಸಾಧ್ಯತೆಗಳನ್ನು ಪೂರೈಸಿಕೊಂಡು ಸ್ಥಗಿತವಾಗುವ ಸಮಯಕ್ಕೆ ಮತ್ತೊಂದು ಸಾಹಿತ್ಯಪರಂಪರೆ ಹುಟ್ಟಿಕೊಳ್ಳುವುದಕ್ಕೆ ಬೇಕಾಗಿರುವ ಆಶಯಗಳನ್ನು ತನ್ನ ಗರ್ಭದಲ್ಲಿಯೇ ಹುದುಗಿಸಿಕೊಂಡಿರುತ್ತದೆ. ಪ್ರಮುಖವಾದ ಈ ಆಶಯದ ಜೊತೆಗೆ ಬೇರೆ ದೇಶದ, ಬೇರೆ ಕಾಲದ, ಬೇರೆ ಶಿಸ್ತಿನ ಹಲವು ಸಂಗತಿಗಳು ನೂತನ ಸಾಹಿತ್ಯದ ನಿರ್ಮಾಣಕ್ಕೆ ಕಾರಣವಾಗಿರುತ್ತವೆ. ಈ ಮಾತುಗಳು ಸಾಹಿತ್ಯದ ಶ್ರೇಷ್ಠತೆಯನ್ನು ಗುರುತಿಸಲು ಬೇಕಾಗುವ ಸೃಜನಶೀಲತೆಯ ನೆಲೆಯನ್ನು ಅರ್ಥಮಾಡಿಸುವುದಕ್ಕೆ ಭದ್ರವಾದ ನೆಲೆಗಟ್ಟನ್ನು ಒದಗಿಸುತ್ತದೆ. ನೋವಿನ ನೆಲೆಯಿಂದ ಬಂದ ಅಂಬೇಡ್ಕರ್ ಅವರು ಸಮಾಜವನ್ನು ಅತ್ಯಂತ ಸೂಕ್ಷ್ಮವಾಗಿ ನೋಡಿದ್ದರು. ಇವರ ಶಿಕ್ಷಣ ಪ್ರಸಾರ ಯೋಜನೆಗಳಿಂದಲೂ ದಲಿತರು ಪ್ರಭಾವಿತರಾದರು. ಹಾಗಾಗಿ ತಮ್ಮ ಅನುಭವಗಳನ್ನು ಹಂಚಿಕೊಳ್ಳತೊಡಗಿದರು. ಅಂಬೇಡ್ಕರ್ ಅವರು 1956ರಲ್ಲಿ ಹಿಂದು ಧರ್ಮವನ್ನು ಬಿಟ್ಟು ಬೌದ್ಧ ಧರ್ಮವನ್ನು ಅವಲಂಬಿಸಿದರು. ದಲಿತರಲ್ಲಿ ಇದು ಮಹತ್ವಪೂರ್ಣ ಬದಲಾವಣೆಯನ್ನು ಉಂಟುಮಾಡಿತು. ಅಂಬೇಡ್ಕರರ ಈ ಧರ್ಮ ಬದಲಾವಣೆ ಮೂಲತಃ ಮೌಲ್ಯಾಂತರವಾಗಿತ್ತು. ದಲಿತರ ನಿಜವಾದ ಪ್ರತಿಭಟನಾ ಸಾಹಿತ್ಯ ಹುಟ್ಟಲು ಇದೂ ಮುಖ್ಯವಾಯಿತು. ಹಿಂದು ಧರ್ಮದಲ್ಲಿನ ಸ್ಥಗಿತತೆಯನ್ನು, ಅಮಾನುಷತೆಯನ್ನು ವಿರೋಧಿಸುತ್ತ ಬೌದ್ಧ ಧರ್ಮದ ಮಾನವೀಯ ನೆಲೆಗಳನ್ನು ಆಪ್ತವಾಗಿ ಕಾಣತೊಡಗಿದ್ದುಂಟು. ದಲಿತರಲ್ಲಿ ಇದರ ಅರಿವು ಮೂಡುತ್ತಲೇ ತಮ್ಮ ಸಂಕಟಗಳಿಗೆ ಉಂಟಾಗಬಹುದಾದ ಮೂಲಭೂತ ಕಾರಣಗಳನ್ನು ಅರಿಯತೊಡಗಿದರು. ಅಸಮಾನತೆ, ಕ್ರೌರ್ಯ, ಮೌಢ್ಯ, ಅನ್ಯಾಯಗಳ ವಿರುದ್ಧ ಸಮರ ನಡೆಸುತ್ತ ಬಂದ ಅಂಬೇಡ್ಕರರ ಪ್ರಭಾವ ದಲಿತ ಲೇಖಕರ ಮೇಲೆ ಗಾಢವಾಯಿತು. ಇಡೀ ದಲಿತ ವರ್ಗಕ್ಕೆ ಅಂಬೇಡ್ಕರ್ ಸ್ಫೂರ್ತಿಯ ಕೇಂದ್ರವಾದರು, ಅವರ ಬದುಕಿನ ಬದಲಾವಣೆಗೆ ನಿಶ್ಚಿತವಾಗಿ ಕಾರಣರಾದರು.

	ದಲಿತ ಸಾಹಿತ್ಯದ ಹುಟ್ಟಿಗೆ ಇನ್ನೊಂದು ಕಾರಣವೆಂದರೆ, ಆಧುನಿಕ ಸಾಹಿತ್ಯದಲ್ಲಿ ಪಾಶ್ಚಾತ್ಯರನ್ನು ಅನುಕರಿಸುವುದೇ ಅತಿಯಾದದ್ದು. ಅನುಕರಣೆ ಸಮಕಾಲೀನ ಸಂದರ್ಭಕ್ಕೆ ಪ್ರಸ್ತುತವಾಗಿರಲಿಲ್ಲ. ಪ್ರೀತಿ, ಪ್ರಣಯವನ್ನು ವಿಜೃಂಭಿಸಿ ಬರೆಯಲಾಗುತ್ತಿತ್ತು. ಧರ್ಮ ಮತ್ತು ಪುರಾಣದ ಸಂಗತಿಗಳನ್ನು ವೈಭವೀಕರಿಸಲಾಯಿತು. ಹೀಗಾಗಿ ಸಮಾಜದ ಬಹುಸಂಖ್ಯಾತ ಜನರ ಕಡೆಗೆ ಒಲವು ತೋರದೆ ವೈಯಕ್ತಿಕ ನೆಲೆಯಲ್ಲಿಯೇ ತನ್ನ ತೆವಲುಗಳನ್ನು ತೀರಿಸಿಕೊಂಡಿತು. ಆದ್ದರಿಂದ ಹಳ್ಳಿಯಿಂದ ಮತ್ತು ಅಸ್ಪøಶ್ಯ ನೆಲೆಯಿಂದ ಬಂದವರಿಗೆ ಈ ಸಾಹಿತ್ಯ ಪರಕೀಯವಾಗೇ ಉಳಿಯಿತು. ಹಲವಾರು ಕ್ಷೇತ್ರದಲ್ಲಿ ಬದಲಾವಣೆಗಳು ಆಗಿದ್ದರೂ ಸಾಹಿತ್ಯ ಮಾತ್ರ ತನ್ನ ದಿಕ್ಕನ್ನು ಬದಲಾಯಿಸಿರಲಿಲ್ಲ. ದಲಿತ ಸಾಹಿತ್ಯ ನಿರ್ಮಾಣವಾಗಲು ಈ ಬೆಳವಣಿಗೆಗಳೂ ಕಾರಣವಾಗಿದ್ದವು. ಮಾನವಜಾತಿ ತಾನೊಂದೆ ವಲಂ ಎಂಬ ಪಂಪನ ಕಾವ್ಯದಿಂದ ಹಿಡಿದು ನವೋದಯ ಮತ್ತು ನವ್ಯದವರೆಗೆ ಅಲ್ಲಲ್ಲಿ ದಲಿತ ಧ್ವನಿಗಳು ಕೇಳಿಬರುತ್ತವೆ. ಆಯಾಕಾಲದ ಸಂದರ್ಭಗಳಿಗೆ ತಕ್ಕಂತೆ ಅವು ಅಭಿವ್ಯಕ್ತಗೊಂಡಿವೆ. ಆದರೆ ಪ್ರಾಚೀನ ಕನ್ನಡ ಸಾಹಿತ್ಯದಲ್ಲಿನ ಈ ದಲಿತಪರ ಧ್ವನಿಗಳು ಆಧುನಿಕ ದಲಿತ ಪ್ರe್ಞÉಗಿಂತ ಭಿನ್ನವಾದವು. ನಿರೂಪಣೆಯ ಸ್ವರೂಪದಲ್ಲಿಯೂ ಭಿನ್ನತೆ ಹೊಂದಿವೆ. ದಲಿತ ಸಾಹಿತ್ಯವನ್ನು ಅವಲೋಕಿಸುವ ಸಂದರ್ಭದಲ್ಲಿ 12ನೆಯ ಶತಮಾನದ ವಚನ ಚಳವಳಿಯನ್ನು ಮತ್ತು ಅದರ ಪ್ರಭಾವವನ್ನು ಮರೆಯುವಂತಿಲ್ಲ. ಕರ್ನಾಟಕದ ಚರಿತ್ರೆಯಲ್ಲಿ 12ನೆಯ ಶತಮಾನ ಒಂದು ವಿಶಿಷ್ಟ ಕಾಲಘಟ್ಟ. ಈ ಕಾಲದ ಚಳವಳಿ ಸೃಷ್ಟಿಸಿದ ಸಾಹಿತ್ಯ, ನಡೆಸಿದ ಪ್ರಯೋಗಗಳು ಜಾಗತಿಕ ಮಟ್ಟದ ಸಾಹಿತ್ಯದ ವಲಯದಲ್ಲಿ ಚರ್ಚೆಯ ವಸ್ತುವಾದವು. ಗತ ಇತಿಹಾಸದಲ್ಲಿ ಕಂಡರಿಯದಷ್ಟು ಸುಧಾರಣೆಗಳನ್ನು ಕಂಡ ಘಟ್ಟವಿದು. ರಾಜಕೀಯವಾಗಿ ಬಸವಣ್ಣ ಉನ್ನತ ಸ್ಥಾನದಲ್ಲಿದ್ದುಕೊಂಡೇ ಕ್ರಾಂತಿಕಾರಕ ಬದಲಾವಣೆಗಳಿಗೆ ಕಾರಣನಾದ. ಈತನ ಬೆಂಬಲದಿಂದಾಗಿ ಶರಣ ಚಳವಳಿಯಲ್ಲಿ ಅಲ್ಲಿಯವರೆಗೂ ಮೂಕರಾಗಿದ್ದವರಿಗೆ ಮಾತನಾಡುವ ಅವಕಾಶ ಒದಗಿಬಂತು. ಕೆಳವರ್ಗದ ವಚನಕಾರರು ಮೊದಲಬಾರಿಗೆ ನಿರ್ಭಿಡೆಯಿಂದ ಬಾಯಿ ಬಿಟ್ಟರು. ಇಂಥವರೆಲ್ಲ ತಮ್ಮ ವಚನಗಳ ಮೂಲಕ ಆತ್ಮವಿಮರ್ಶೆಯನ್ನು, ಸಮಾಜವಿಮರ್ಶೆಯನ್ನು ಮಾಡಿಕೊಂಡದ್ದಲ್ಲದೆ ಸಮಾಜೋಧಾರ್ಮಿಕ ಆಂದೋಲನವಾಗಿ ಪರಿವರ್ತಿತವಾದ ಈ ಚಳವಳಿಯಲ್ಲಿ ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಮಾದಾರ ಧೂಳಯ್ಯ ಮೊದಲಾದ ದಲಿತ ವರ್ಗದ ಅನುಭವಿಗಳು ಮುಂಚೂಣಿಯಲ್ಲಿ ನಿಂತದ್ದು ಚಾರಿತ್ರಿಕ ದಾಖಲೆ. ಚಳವಳಿಯ ಭಾಗವಾಗಿ ನಿರ್ಮಾಣಗೊಂಡ ವಚನಗಳಲ್ಲಿ ಇವರೆಲ್ಲ ತಮ್ಮ ಅನುಭವಗಳಿಗೆ ರೂಪ ನೀಡಿದರು. ಇವರಲ್ಲಿ ದಲಿತ ಮಹಿಳೆಯರ ಪಾತ್ರವನ್ನೂ ನಾವು ಮರೆಯುವಂತಿಲ್ಲ.

	20ನೆಯ ಶತಮಾನದಲ್ಲಿ ಜರುಗಿದ ಕೆಲವು ಸುಧಾರಣೆಗಳು, ಸಮಕಾಲೀನ ಶಿಕ್ಷಣ, ಶ್ರಮಜೀವಿಗಳ ಪರವಾದ ಚಿಂತನೆಗಳು ಇವೆಲ್ಲದರಿಂದಾಗಿ ದಲಿತರಲ್ಲಿ ಅರಿವಿನ ವಾತಾವರಣ ಮೂಡತೊಡಗಿತು. ಕಳೆದ ಶತಮಾನದ 60ರ ದಶಕದಲ್ಲಿ ಮಹಾರಾಷ್ಟ್ರದಲ್ಲಿ ಜನಪ್ರಿಯತೆ ಗಳಿಸಿದ ದಲಿತಸಾಹಿತ್ಯ ಚಳವಳಿ ಕನ್ನಡ ನಾಡಿನ ದಲಿತರ ಮೇಲೆ ಯಥೇಚ್ಚವಾಗಿ ಬೀರಿತು. ಅಂಬೇಡ್ಕರ್ ದಲಿತರಿಗೆ ನಾಯಕರಾದುದರಿಂದಲೂ ಈ ಪ್ರಭಾವ ಅನಿವಾರ್ಯವಾಯಿತು. ಈ ನಡುವೆ ದಯಾ ಪವಾರ್, ನಾಮದೇವ ಡಸಾಳ, ಲತೀಫಾ, ಕೇಶವಮೇಶ್ರಾಮ್, ವಾಮನ ನಿಂಬಾಳ್ಕರ್, ಅರುಣ್ ಕಾಂಬ್ಳೆ, ಬಾಬುರಾವ್ ಬಾಗುಲ್ ಮೊದಲಾದವರ ಸಾಹಿತ್ಯಪ್ರಭಾವ ಮತ್ತು ಪ್ರೇರಣೆ ಕನ್ನಡ ದಲಿತ ಲೇಖಕರ ಮೇಲೆ ಆಗಿರುವುದನ್ನು ಗಮನಿಸಬಹುದು. ಕರ್ನಾಟಕದ ಜನಪರ ಚಳವಳಿಗಳಿಗೆ ಇದರಿಂದ ಸಾಕಷ್ಟು ಲಾಭವಾಯಿತು. ಜೊತೆಗೆ ಹಿಂದಿಯಲ್ಲಿ ಮಾಕ್ರ್ಸ್‍ವಾದಿಗಳ ಪ್ರಭಾವದಿಂದ ಕಾಣಿಸಿಕೊಂಡ ಜನವಾದಿ ಸಾಹಿತ್ಯ, ಕೇರಳದ ಮಾಕ್ರ್ಸ್‍ವಾದಿ ಲೇಖಕರ ಸಾಹಿತ್ಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವ ಬೀರುತ್ತಿರುವ ಕಪ್ಪುಸಾಹಿತ್ಯ, ಗೆರಿಲ್ಲಾ ಸಾಹಿತ್ಯ ಮುಂತಾದುವೆಲ್ಲ ದಲಿತಸಾಹಿತ್ಯದ ಮೇಲೆ ಪ್ರಭಾವ ಬೀರಿವೆ.

	ಕನ್ನಡದ ದಲಿತ ಬರೆಹಗಾರರಿಗೆ ಮುಖ್ಯವಾಗಿ ಪ್ರೇರಣೆ ದೊರೆತದ್ದು, ಮಹಾರಾಷ್ಟ್ರದ ದಲಿತ ಪ್ಯಾಂಥರ್ ಚಳವಳಿಯಿಂದ. ಪ್ಯಾಂಥರ್ ಚಳವಳಿ ಹಿಂದು ಧರ್ಮದ ಅನಿಷ್ಟಗಳಾದ ಚಾತುರ್ವಣ್ರ್ಯ, ಜಾತೀಯತೆ, ಅಸ್ಪೃಶ್ಯತೆ, ದೇವರ ಪರಿಕಲ್ಪನೆ, ಡಂಭಾಚಾರ, ಧರ್ಮದ ದುರ್ಬಳಕೆ, ದೌರ್ಜನ್ಯ, ವಂಚನೆ ಮೊದಲಾದವುಗಳ ವಿರುದ್ಧ ಪ್ರತಿಭಟಿಸಿ ನಡೆಸಿದ ಚಳವಳಿಯಾಗಿದೆ. ದಲಿತ ಪ್ಯಾಂಥರ್ಸ್‍ನವರು ದಲಿತರ ಭವಿಷ್ಯ ದಲಿತರ ಕೈಯಲ್ಲಿಯೇ ಇದೆ ಎಂದದ್ದಲ್ಲದೆ ದಲಿತರ ಮೇಲೆ ಮೇಲ್ಜಾತಿಯವರು ಕಟ್ಟಿದ ಭೋಗಜೀವನವನ್ನು ಖಂಡಿಸಿದರು. ಕಪ್ಪು ಸಾಹಿತ್ಯದ ಪ್ರತಿಭಟನೆಯಂತೂ ಭಾರತದ ಬೇರೆಬೇರೆ ಭಾಷೆಗಳಲ್ಲಿ ಜರುಗತೊಡಗಿತ್ತು. ಇವೆಲ್ಲದರ ಪ್ರಭಾವ ಕನ್ನಡ ದಲಿತ ಸಾಹಿತ್ಯದ ಮೇಲೂ ಉಂಟಾಗತೊಡಗಿತು.

	 ಈ ಸಂದರ್ಭದಲ್ಲಿ ಸಾಹಿತ್ಯಕ ಪ್ರೇರಣೆಗಳ ಜೊತೆಗೆ ಸಾಹಿತ್ಯೇತರ ಪ್ರೇರಣೆಗಳೂ ಕೆಲಸ ಮಾಡಿದವು. ಮುಖ್ಯವಾಗಿ ಎಡಪಂಥೀಯ ಸಿದ್ಧಾಂತಗಳೆಲ್ಲವೂ ದಲಿತ ಸಾಹಿತ್ಯದ ಮೇಲೆ ಪ್ರಭಾವ ಬೀರಿದವು. ಇದರ ಮೂಲಕವಾಗಿಯೂ ಈ ಪಂಥದ ಲೇಖಕರ ಸೃಜನಶೀಲ ಚಟುವಟಿಕೆಗಳಿಗೆ ಬೆಂಬಲ ಒದಗಿತು. ಮೀಸಲಾತಿಯಿಂದ ದಲಿತರಲ್ಲಾದ ಸುಧಾರಣೆಗಳು, ಮತಾಂತರದ ಪ್ರಸಂಗಗಳು, ವ್ಯಾಪಕವಾಗಿ ಜರುಗುತ್ತಿರುವ ಉಪಸಂಸ್ಕøತಿಗಳ ಅಧ್ಯಯನ ಈ ಎಲ್ಲ ನೆಲೆಗಳಿಂದಾಗಿ ದಲಿತರಲ್ಲಿ ಜಾಗೃತಿ ಮೂಡಿ, ಇವರಲ್ಲಿ ಪಟ್ಟ ಪಾಡುಗಳನ್ನು ಸಾಹಿತ್ಯವಾಗಿಸುವ ದಿಸೆಯಲ್ಲಿ ದಲಿತ ಲೇಖಕರು ಕಾರ್ಯೋನ್ಮುಖರಾದರು. ಅಖಂಡ ದುಃಖ ದುಮ್ಮಾನಗಳೇ ದಲಿತ ಸಾಹಿತ್ಯದ ಮೂಲ ಸ್ಫೋಟವಾಯಿತು. ಭೂ ಆಕ್ರಮಣ ಹೋರಾಟಗಳು, ವೆಂಕಟಸ್ವಾಮಿ ಆಯೋಗದ ವರದಿ, ಗಾಂಧಿ ಚಲನಚಿತ್ರದ ಬಹಿಷ್ಕಾರ, ಖೋಟಾ ಜಾತಿ ಪತ್ರಗಳ ಹಂಚಿಕೆ ವಿರುದ್ಧದ ಹೋರಾಟ, ಬೆತ್ತಲೆ ಸೇವೆ, ದೇವದಾಸಿ ಪದ್ಧತಿ ವಿರುದ್ಧದ ಹೋರಾಟ, ಬೆಲ್ಚಿ, ಕುದುರೆ ಮೋತಿ ಪ್ರಕರಣ, ಕಂಬಾಲಪಲ್ಲಿ ಪ್ರಕರಣ, ಬೆಂಡಿಗೇರಿ ಪ್ರಕರಣ, ಚುನಾವಣಾ ಬಹಿಷ್ಕಾರ ಮುಂತಾದ ಘಟನೆಗಳು ದಲಿತ ಚಳವಳಿ ಹೆಚ್ಚು ಚಾಲನೆಗೊಳ್ಳಲು ಕಾರಣವಾದವಲ್ಲದೆ ದಲಿತ ಸಾಹಿತ್ಯ ರಚನೆಯ ಸಂದರ್ಭದಲ್ಲೂ ಪರಿಣಾಮಕಾರಿಯಾಗಿ ಕೆಲಸ ಮಾಡಿದುವು.

	ದಲಿತ ಸಾಹಿತ್ಯದ ಆರಂಭದ ಬೆಳೆವಣಿಗೆಯಲ್ಲಿ ಸಿಟ್ಟು, ಅಬಪಿರ, ಆಕ್ರೋಶಗಳು ಪ್ರಧಾನವಾಗಿ ಕಂಡುಬಂದರೂ ಆಗಿನ ಸಂದರ್ಭಕ್ಕೆ ಅದು ಅನಿವಾರ್ಯವಾಗಿತ್ತು. ಆಳವಾದ ನೋವನ್ನು ಅಭಿವ್ಯಕ್ತಿಸಲು ಕಂಡುಕೊಂಡ ಮಾರ್ಗವಾಗಿತ್ತು. 20ನೆಯ ಶತಮಾನದ 70ರ ದಶಕದಲ್ಲಿ ಇಂತಹ ಬರೆವಣಿಗೆ ದಲಿತ ಸಾಹಿತ್ಯದ ಲಕ್ಷಣವಾಗಿಯೇ ಗೋಚರವಾಯಿತು. ಜೋರಾಗಿ ಹಾಡಿಕೊಂಡಾಗ ಮಾತ್ರ ಕವಿಯ ಭಾವನೆಗಳು ಮನ ದಟ್ಟಾಗುತ್ತವೆಂಬ ಆಶಯವನ್ನು ವ್ಯಕ್ತಪಡಿಸುವ ಮೂಲಕ ಗೇಯತೆಯ ಗುಣಗಳನ್ನು ಒಳಗೊಂಡ ದಲಿತಕಾವ್ಯ ರಚನೆಯಾಯಿತು. ಈ ಗುಣಗಳು ಕನ್ನಡ ಸಾಹಿತ್ಯಕ್ಕೆ ಹೊಸ ಸೇರ್ಪಡೆಗಳೆನಿಸಿದವು. ಇದರಿಂದಾಗಿಯೂ ಕನ್ನಡ ಕಾವ್ಯಕ್ಕೆ ದಲಿತಕಾವ್ಯ ಒಂದು ಶಕ್ತಿಯನ್ನು ನೀಡಿತು. ಹೊಲೆಮಾದಿಗರ ಹಾಡು ಕವನಸಂಕಲನವನ್ನು ಕೊಡುವುದರ ಮೂಲಕ ಕನ್ನಡ ಕಾವ್ಯಕ್ಕೆ ಚುರುಕು ಮುಟ್ಟಿಸಿದ ಸಿದ್ಧಲಿಂಗಯ್ಯ ಅವರು ನೊಂದವರನ್ನು ಕಾವ್ಯದ ವಸ್ತುವಾಗಿಸುವ ಜನಪರ ಆಶಯದಿಂದ ಜನಪರ ಛಂದಸ್ಸಿನಲ್ಲಿ ಕಾವ್ಯ ಕಟ್ಟಿದ್ದು ಗಮನಾರ್ಹ. ಇವರ ಕಪ್ಪು ನಾಡಿನ ಹಾಡು ಕಲಾತ್ಮಕತೆಯ ಜೊತೆಗೆ ಪ್ರಯೋಗಶೀಲತೆಯನ್ನು ಎತ್ತಿ ಹಿಡಿಯುವ ಕವನಸಂಕಲನ. ಅನಂತರ ಬಂದ ಸಾವಿರಾರು ನದಿಗಳು ಸಂಕಲನದಲ್ಲಿ ವೈಯಕ್ತಿಕ ಕೋಪಕ್ಕಿಂತ ಸಾರ್ವತ್ರಿಕ ಸ್ವರೂಪದ ಕೋಪವೇ ಗಾಢವಾಯಿತು. ವಿ.ಮುನಿವೆಂಕಟಪ್ಪ, ಮ.ನ.ಜವರಯ್ಯ, ಮುಳ್ಳೂರು ನಾಗರಾಜ, ಸತ್ಯಾನಂದ ಪಾತ್ರೋಟ, ಅರವಿಂದ ಮಾಲಗತ್ತಿ, ಎಲ್.ಹನುಮಂತಯ್ಯ, ಚೆನ್ನಣ್ಣ ವಾಲೀಕಾರ, ಕೆ.ಬಿ.ಸಿದ್ಧಯ್ಯ, ಜಂಬಣ್ಣ ಅಮರಚಿಂತ, ಬರಗೂರು ರಾಮಚಂದ್ರಪ್ಪ, ಅನಸೂಯ ಕಾಂಬಳೆ, ಸುಕನ್ಯಾ ಮಾರುತಿ, ಗಂಗಾರಾಂ ಚಂಡಾಳ, ಕೆ.ರಾಮಯ್ಯ ಮೊದಲಾದ ಕವಿಗಳು ಶೋಷಿತರ ಸ್ಥಿತಿಯ ಸೂಕ್ಷ್ಮಗಳ ಶೋಧನೆಗೆ ತೊಡಗುವುದರ ಮೂಲಕ ಮಹತ್ವದ ಕಾವ್ಯಸೃಷ್ಟಿಗೆ ಕಾರಣರಾದರು. ಅರವಿಂದ ಮಾಲಗತ್ತಿಯವರ `ಕಪ್ಪುಕಾವ್ಯ, `ಮೂಕನಿಗೆ ಬಾಯಿ ಬಂದಾಗ, `ನಾದನಿನಾದ ಸಂಕಲನಗಳಲ್ಲಿ ಮಾನವನ ಕ್ಷುದ್ರತೆಗಳು ಕಾವ್ಯರೂಪದಲ್ಲಿ ದಾಖಲಾಗುತ್ತಾ ಹೋಗಿವೆ. ಜಮೀನ್ದಾರಿ ಪದ್ಧತಿ, ಅದರಿಂದಾದ ಆರ್ಥಿಕ ಅನ್ಯಾಯ, ಅದರ ವಿರುದ್ಧ ಬಂಡೆದ್ದ ವಿವರಗಳು ಇವೂ ದಲಿತಕಾವ್ಯರಚನೆಯಲ್ಲಿ ಮುಖ್ಯವಾದವು. ಸಿಟ್ಟು, ಆಕ್ರೋಶಗಳ ನಡುವೆಯೂ ಪ್ರೇಮ, ಅನುರಾಗ, ಪ್ರಣಯ ಇತ್ಯಾದಿ ಶೃಂಗಾರ ಭಾವಗಳೂ ಕಾವ್ಯಾಭಿವ್ಯಕ್ತಿಯಲ್ಲಿ ಕಾಣಿಸಿಕೊಂಡವು. 

	ದಲಿತಕವಿಗಳು ಸಾಮಾನ್ಯವಾಗಿ ಸ್ಥಳೀಯ ಸಮಸ್ಯೆಗಳಿಗೆ ತಮ್ಮ ಕಾವ್ಯಗಳಲ್ಲಿ ಪ್ರಾತಿನಿಧ್ಯ ನೀಡುತ್ತಲೇ ಬಂದಿದ್ದಾರೆ. ದಲಿತರ ಮೇಲೆ ನಡೆದ ಹಲ್ಲೆಗಳು, ಕ್ರೌರ್ಯಗಳು ಇವು ದಲಿತಕವಿಗಳಲ್ಲಿ ಹಾಡಾಗಿ ಪರಿಣಮಿಸಿವೆ. ಆದರೆ ಮರಾಠಿ ದಲಿತಕವಿಗಳಲ್ಲಿ ಇಂಥ ಪ್ರಸಂಗಗಳು ಹಾಡುಗಳಾಗದೆ ಕೇವಲ ಕಾವ್ಯವಾಗಿವೆ. ನೋವು, ಅವಮಾನ ಎರಡೂ ಭಾಷೆಯಲ್ಲಿ ಸ್ಥಾಯಿಯಾಗಿದೆ ನಿಜ. ಶ್ರೀಮಂತರನ್ನು, ಬಡ್ಡಿ ಸಾಲ ವಸೂಲಿಗಾರರನ್ನು ಕಾವ್ಯದಲ್ಲಿ ತರಾಟೆಗೆ ತೆಗೆದುಕೊಳ್ಳಲಾಗಿದೆ. ಆದರೂ ಕರ್ನಾಟಕೇತರ ರಾಜ್ಯಗಳ ಎಷ್ಟೋ ದಲಿತರ ನೋವಿನ ಘಟನೆಗಳು, ಸಮಸ್ಯೆಗಳು ಕನ್ನಡ ದಲಿತ ಕಾವ್ಯವನ್ನು ಪ್ರವೇಶಿಸಿಯೇ ಇಲ್ಲವೆಂಬುದು ಆಶ್ಚರ್ಯದ ಸಂಗತಿ.

	ಕನ್ನಡ ಸಾಹಿತ್ಯದಲ್ಲಿ ಕಥಾವಾಹಿನಿಗೆ ಸಿಕ್ಕ ಪ್ರಾಶಸ್ತ್ಯ ಅನನ್ಯವಾದುದು. ನವೋದಯದಿಂದ ದಲಿತ ಬಂಡಾಯದವರೆಗೆ ಆಯಾ ಪಂಥಗಳ ಆಶಯಗಳಿಗೆ ತಕ್ಕಂತೆಯೇ ಕಥಾಸಾಹಿತ್ಯ ಸೃಷ್ಟಿಯಾಗುತ್ತ ಬಂತು. ಕಾವ್ಯದ ಅನಂತರದ ಸ್ಥಾನ ಕಥೆಗಳಿಗೇ ಸಲ್ಲುತ್ತದೆ. ಮಾಸ್ತಿ, ಕುವೆಂಪು, ಆನಂದ, ಬಸವರಾಜ ಕಟ್ಟೀಮನಿ, ನಿರಂಜನ, ಅನುಪಮಾ ನಿರಂಜನ, ತೇಜಸ್ವಿ, ಅನಂತಮೂರ್ತಿ, ಲಂಕೇಶ್ ಮುಂತಾದವರೆಲ್ಲ ವಿಶಿಷ್ಟ ಸಂವೇದನಾಶೀಲ ಕಥೆಗಳನ್ನು ನೀಡಿದವರು. ದಲಿತ ಚಳವಳಿಯ ಪ್ರಭಾವದಿಂದಾಗಿ ಬಂದ ಕಥೆಗಳು ಸಹ ಕನ್ನಡ ಕಥಾಸಾಹಿತ್ಯದಲ್ಲಿ ಹೊಸ ಅಲೆಗೆ ಹೆಸರಾದವು. ಹಸಿವು, ದುಃಖ, ದುಮ್ಮಾನ, ಶೋಷಣೆ, ಹತಾಶೆ, ಕ್ರೌರ್ಯ, ದೌರ್ಜನ್ಯ, ಅಮಾಯಕತೆಗಳು ಕಥೆಯ ವಸ್ತುಗಳಾದವು. ಇಂಥ ಘಟನೆ, ಪ್ರಸಂಗಗಳನ್ನು ಸೆರೆಹಿಡಿದು ಕಲಾತ್ಮಕವಾಗಿ ಅಭಿವ್ಯಕ್ತಿ ನೀಡಿದ ಕಥೆಗಾರರು ಹಲವರಿದ್ದಾರೆ. ಅವರ ಕಥಾ ಸಂಕಲನಗಳೂ ಕನ್ನಡ ಕಥಾ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಮನ್ನಣೆಗೆ ಪಾತ್ರವಾದವು. ದಲಿತ ಸಾಹಿತ್ಯದ ಶಕ್ತಿಯುತ ಭಾಗವಾಗಿ ಈ ಸಣ್ಣಕಥೆಗಳು ಕಾಣಿಸಿಕೊಂಡಿವೆ. ದೇವನೂರು ಮಹಾದೇವ ಅವರ ದ್ಯಾವನೂರು, ಚೆನ್ನಣ್ಣ ವಾಲೀಕಾರರ ಕಪ್ಪು ಕಲೆಗಳು, ಕುತ್ತದಲ್ಲಿ ಕುದ್ದವರ ಕತೆಗಳು, ಬರಗೂರು ರಾಮಚಂದ್ರಪ್ಪ ಅವರ ಸುಂಟರಗಾಳಿ, ಕಪ್ಪು ನೆಲದ ಕೆಂಪುಕಾಲು, ಬಯಲಾಟದ ಭೀಮಣ್ಣ, ಅರವಿಂದ ಮಾಲಗತ್ತಿ ಅವರ ಮುಗಿಯದ ಕತೆಗಳು, ಮ.ನ.ಜವರಯ್ಯ ಅವರ ಬುರುಡೆಗೆ ಸ್ವರ್ಗ, ಮೊಗಳ್ಳಿ ಗಣೇಶರ ಬುಗುರಿ, ಭೂಮಿ, ಜನಾರ್ಧನ ಎರ್ಪಕಟ್ಟೆ ಅವರ ಪ್ರಕ್ರಿಯೆ, ತಿರಸ್ಕøತರು, ಭದ್ರಯ್ಯ ತಿಮ್ಮಸಂದ್ರ ಅವರ ಬಾಗಿಲ ಬೀಗ ಮತ್ತು ರೇಣು, ಎಚ್ ಬಾಲರಾಜು ಅವರ ಸೂರ್ಯ, ಕತ್ತಲು, ಬೆಳಕು, ಹೊಂಗಳ್ಳಿ ಸೋಮಣ್ಣ ಅವರ ತಮ್ಮಟೆ, ನಟರಾಜ್ ಹುಳಿಯಾರ್ ಅವರ ಮತ್ತೊಬ್ಬ ಸರ್ವಾಧಿಕಾರಿ ಇವೆಲ್ಲ ದಲಿತ ಪ್ರe್ಞÉಯನ್ನು ಉಳಿಸಿಕೊಂಡು ಕಲಾತ್ಮಕತೆಗೆ ಹೆಸರಾದಂಥವು. ಹಾಗೆಯೇ ಈರಣ್ಣ ಕೋಸಗಿ, ಬಿ.ಚಿನ್ನಸ್ವಾಮಿ, ಬಿ.ಟಿ.ಜಾಹ್ನವಿ, ಬಸವಲಿಂಗಯ್ಯ, ಬಾನಂದೂರು ಕೆಂಪಯ್ಯ, ಮೋಹನ ನಾಗಮ್ಮನವರ, ಎಸ್.ಆರ್. ಗುರುನಾಥ, ರಾಮಕೃಷ್ಣ ಗುಂಡಿ, ಲಕ್ಷ್ಮಣ್, ಸುಬ್ಬು ಹೊಲೆಯಾರ್, ವೀರಯ್ಯ ಕಾಡುಕೊತ್ತನಹಳ್ಳಿ, ಬಸವರಾಜ ಕುಕ್ಕರಹಳ್ಳಿ, ಚಂದ್ರಕಾಂತವಡ್ಡು, ಕುಂ.ವೀರಭದ್ರಪ್ಪ, ಬಿ.ಟಿ.ಲಲಿತಾನಾಯಕ್ ಮೊದಲಾದವರು ತಮ್ಮ ವಲಯದ ಜೀವನಾನುಭವಗಳನ್ನು ಕಥೆಯಾಗಿಸುವಲ್ಲಿ ಯಶಸ್ಸನ್ನು ಹೊಂದಿದವರಾಗಿದ್ದಾರೆ. ಅನೇಕರು ದಲಿತ ಬದುಕಿನ ಸಾಂಸ್ಕøತಿಕ ವಿವರಗಳನ್ನು ಕಥಾಹಂದರದಲ್ಲಿ ನೀಡುವಲ್ಲಿ ಸಫಲರಾಗಿದ್ದಾರೆ.

	ಕಾದಂಬರಿಯ ಪ್ರಕಾರದ ಮೂಲಕವೂ ದಲಿತ ಲೇಖಕರು ತಮ್ಮ ಭಾವನೆಗಳನ್ನು, ಸಿದ್ಧಾಂತಗಳನ್ನು, ತಾವು ತಲುಪಬೇಕಾದ ಗುರಿಯ ಬಗೆಗಿನ ಚಿಂತನೆಗಳನ್ನು ಹಂಚಿಕೊಂಡಿದ್ದಾರೆ. ಒಂದೊಂದು ಚಳವಳಿಯ ಸಂದರ್ಭದಲ್ಲೂ ಕಾದಂಬರಿಗಳು ಬಿಟ್ಟುಕೊಟ್ಟ ಧೋರಣೆಗಳು ವಿಶಿಷ್ಟ ವಾದವು. ದಲಿತ ಚಳವಳಿಯ ಕಾಲದಲ್ಲಿ ಕಾದಂಬರಿಗಳು ಗ್ರಾಮಾಂತರ ನೆಲೆಗಳ ದಲಿತ ಕುಟುಂಬಗಳ ಸಮಸ್ಯೆಗಳು ಅವರ ಸಾಂಸ್ಕøತಿಕ ಸಂಪನ್ನತೆಯನ್ನು, ಸ್ಥಿತ್ಯಂತರಗೊಳ್ಳುತ್ತಿರುವ ಮೌಲ್ಯಗಳೊಂದಿಗಿನ ಹೋರಾಟವನ್ನು, ತಮ್ಮ ಸಮಸ್ಯೆಗಳ ಬಗೆಗಿನ ತಿಳುವಳಿಕೆಗಳನ್ನು ನಿರೂಪಿಸುವಲ್ಲಿ ಯಶಸ್ಸನ್ನು ಹೊಂದಿವೆ. ಜಿ.ವೆಂಕಟಯ್ಯ ಅವರ ನೊಂದಜೀವ, ದೇವನೂರರ ಒಡಲಾಳ, ಕುಸುಮಬಾಲೆ, ಮ.ನ.ಜವರಯ್ಯ ಅವರ ಮಾಗಿ, ಅರವಿಂದ ಮಾಲಗತ್ತಿ ಅವರ ಕಾರ್ಯ, ಮುಳ್ಳೂರು ನಾಗರಾಜರ ಮರಣ ಮಂಡಲ ಮಧ್ಯದೊಳಗೆ, ದಂಡಕಾರಣ್ಯ, ಶಿವರುದ್ರ ಕಲ್ಗೋಳಿಕರ್ ಅವರ ಹೊಲಗೇರಿಯ ರಾಜಕುಮಾರ, ಚೆನ್ನಣ್ಣ ವಾಲೀಕಾರರ ಬೆಳ್ಯ, ಹುಲಿಗೆಮ್ಮ, ಕೋಟೆಬಾಗಿಲು, ಒಂದು ಹೆಣ್ಣಿನ ಒಳಜಗತ್ತು, ಬಿ.ಟಿ.ಲಲಿತಾನಾಯಕರ ಗತಿ, ಗೀತಾ ನಾಗಭೂಷಣರ ಮಾಪುರ ತಾಯಿಯ ಮಕ್ಕಳು, ನೋವು ಮುಂತಾದ ಕಾದಂಬರಿಗಳು ದಲಿತ ಸಮುದಾಯದ ವಿವಿಧ ಆಯಾಮಗಳನ್ನು ಗ್ರಹಿಸಿದ್ದಲ್ಲದೆ ಪ್ರಾದೇಶಿಕ ಭಾಷೆಯಲ್ಲಿ ಅವನ್ನು ಅಭಿವ್ಯಕ್ತಿಸಲು ಪ್ರಯತ್ನಿಸಿದ್ದು ಉಪಸಂಸ್ಕøತಿಗಳ ಅಧ್ಯಯನದ ದೃಷ್ಟಿಯಿಂದ ಪ್ರಮುಖವೆನಿಸಿತು. ಸಾಂಸ್ಕøತಿಕ ಸಂಘರ್ಷದ ವಿಶ್ಲೇಷಣೆಯಲ್ಲಿಯೂ ಅವು ತೊಡಗಿದವು. ದಲಿತರ ಜಾಗೃತಿಯೂ ಸ್ಥಿತ್ಯಂತರಗೊಳ್ಳುತ್ತಿರುವ ಸಂದರ್ಭದಲ್ಲಿ ಸಮಾಜದ ಸಮಸ್ಯಾತ್ಮಕ ನೆಲೆಗಳು ಅತ್ಯಂತ ಪರಿಣಾಮಕಾರಿಯಾಗಿಯೇ ಚಿತ್ರಿಸಲ್ಪಟ್ಟವು. ಕಥೆ ಮತ್ತು ಕಾದಂಬರಿ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿದ ಸಾಹಿತ್ಯಾಭಿವ್ಯಕ್ತಿಯನ್ನು ಗುರುತಿಸಬಹುದು.

	ಇನ್ನು ದಲಿತ ವಸ್ತುವನ್ನಾಧರಿಸಿದ ಶೂದ್ರ ತಪಸ್ವಿ, ಜಲಗಾರ, ಬೆರಳ್ಗೆ ಕೊರಳ್ (ಕುವೆಂಪು), ಏಕಲವ್ಯ (ಕೈಲಾಸಂ) ಮತ್ತು 12ನೆಯ ಶತಮಾನದ ಅಂತರ್ಜಾತೀಯ ವಿವಾಹವನ್ನು ಕುರಿತ ನಾಟಕಗಳು ಬೆಳಕುಕಂಡಿವೆ. ಇಂಥ ನಾಟಕಗಳನ್ನು ಬಿಟ್ಟರೆ ದಲಿತ ಪ್ರe್ಞÉಯ ನಾಟಕಗಳು ಹೊರಬಂದಿರುವುದು ತೀರಾ ವಿರಳ. 70ರ ದಶಕದಲ್ಲಿ ದಲಿತ ಪ್ರe್ಞÉಯ ನಾಟಕಗಳು ರಂಗಭೂಮಿಯನ್ನು ಪ್ರವೇಶಿಸಿರುವುದಂತೂ ನಿಜ. ಬೆಲ್ಚಿ, ಕುದುರೆ ಮೋತಿ ಪ್ರಸಂಗ, ಬೆಳ್ಳಿಗೇರಿ ಪ್ರಕರಣ, ಪತ್ರೆ ಸಂಗಪ್ಪನ ಕೊಲೆ, ಶೇಷಗಿರಿಯಪ್ಪನ ಕೊಲೆ  ಈ ಘಟನೆಗಳನ್ನು ಆಧರಿಸಿದ ಬೀದಿ ನಾಟಕಗಳು ಹುಟ್ಟಿಕೊಂಡವು. ಆ ಸಂದರ್ಭದಲ್ಲಿ ಇವು ದಲಿತ ಲೋಕದ ಪ್ರಮುಖ ನಾಟಕಗಳಾಗಿದ್ದವು. ದಲಿತ ಜನಾಂಗವನ್ನು ಜಾಗೃತಗೊಳಿಸಲು ಅವರ ಭಾಷೆ, ಸಮಸ್ಯೆಯಲ್ಲಿ ಮೂಡಿದಕಾರ್ಯ ಇದಾಗಿತ್ತು. ಸಿದ್ಧಲಿಂಗಯ್ಯ ಅವರ ಪಂಚಮ ನೆಲಸಮ, ಏಕಲವ್ಯ ನಾಟಕಗಳು ದಲಿತರ ಬಾಳಿನ ಆಧುನಿಕ ಸಮಸ್ಯೆಗಳನ್ನು ಸಮರ್ಥವಾಗಿ ನಿರೂಪಿಸಿದವು. ಅಲ್ಲದೆ ಇವರ ಪ್ರಸಿದ್ಧ ಕವಿತೆಗಳಾದ ಕತ್ತೆ ಮತ್ತು ಧರ್ಮ, ಅಲ್ಲೆ ಕುಂತವರೆ, ಕೊಲೆಯ ಹಿಂದಿನ ರಾತ್ರಿಗಳು ಬೀದಿ ನಾಟಕಗಳಾಗಿ ರೂಪಿತಗೊಂಡು ಪ್ರಯೋಗವಾಗಿ ಜನಪ್ರಿಯತೆ ಗಳಿಸಿದವು. ವರ್ಣ ಹೋರಾಟದಿಂದ ಆರಂಭವಾಗುವ ದಲಿತ ಸಾಹಿತ್ಯ ವರ್ಗ ಹೋರಾಟಕ್ಕೆ ಬಂದು ನಿಲ್ಲಬೇಕೆಂಬುದನ್ನು ತಿಳಿಸುವ ಸಿದ್ಧಲಿಂಗಯ್ಯ ಅವರ ಕೃತಿಗಳು ದಲಿತ ರಂಗಭೂಮಿಯ ಮಹತ್ವದ ಕೊಡುಗೆಗಳಾಗಿವೆ. ದೇವನೂರರ ಒಡಲಾಳ, ಕುಸುಮಬಾಲೆ, ಒಂದು ದಹನದ ಕತೆ ಇತ್ಯಾದಿಗಳು ರಂಗರೂಪಕಗಳಾಗಿ ಪ್ರದರ್ಶನಗೊಂಡಿವೆ. ಸತ್ಯಾನಂದ ಪಾತ್ರೋಟರ ಮತ್ತೊಬ್ಬ ಏಕಲವ್ಯ ಮತ್ತು ಯಾರೂ ಇಲ್ಲೋ ಯಪ್ಪಾ, ನಮಗೆ ಸಾಕ್ಷಿ ಇವು ಸಹ ಗಮನಿಸಬೇಕಾದ ನಾಟಕಗಳು. ಸಮಾಜದ ಏರುಪೇರುಗಳನ್ನು ದಲಿತ ಲೋಕದ ಸಮಸ್ಯೆಗಳನ್ನು ತೆಗೆದುಕೊಂಡು ಜಾನಪದೀಯ ಲೇಪದಿಂದ ನಾಟಕ ರಚಿಸಿದವರಲ್ಲಿ ಚೆನ್ನಣ್ಣ ವಾಲೀಕಾರ ಪ್ರಮುಖರು. ವೇಶ್ಯಾ ಸಮಸ್ಯೆಯ ಟೊಂಕದ ಕೆಳಗಿನ ಜನ, ದೇವದಾಸಿ ಪದ್ಧತಿಯ ಜೋಗತಿ, ಭೂಮಿ ವಿವಾದದ ಜನವೆಂಬ ಆಸ್ತಿ ಮೊದಲಾದುವು ಗಮನಾರ್ಹ. ಜಾತಿಯ ಕ್ರೂರ ಸಂಕೋಲೆಗಳಿಂದಾಗುವ ಪರಿಣಾಮಗಳನ್ನು ಬಿ.ಚಿನ್ನಸ್ವಾಮಿ ಅವರು ಕೆಂಡಮಂಡಲದಲ್ಲಿ ಅಭಿವ್ಯಕ್ತಿಸಿದ್ದಾರೆ. ಜಮೀನ್ದಾರಿ ಪದ್ಧತಿ ಹಾಗೂ ಜಾತಿ ವ್ಯವಸ್ಥೆಯ ವಿರುದ್ಧ ಬಂಡೇಳುವ ಜಾಜ ಎಂಬ ನಾಟಕವನ್ನು ಮಲ್ಲಿಕಾ ಘಂಟಿ ರಚಿಸಿದ್ದಾರೆ. ಅರವಿಂದ ಮಾಲಗತ್ತಿ ಅವರ ಸಮುದ್ರದೊಳಗಣ ಉಪ್ಪು ತೆರೆದಿಡುವ ಈ ನಾಟಕದಲ್ಲಿ ಪಾತ್ರಗಳು ಪ್ರಧಾನವಾಗಿರದೆ ವಿಚಾರವೇ ಪ್ರಧಾನವಾಗಿದೆ. ಅಸ್ಪøಶ್ಯತೆ, ನಗರ ಮತ್ತು ಗ್ರಾಮದ ಪರಿಕಲ್ಪನೆಗಳು, ಪ್ರೀತಿ ಪ್ರೇಮಗಳ ಮಧುರ ಬಾಂಧವ್ಯಗಳನ್ನು ಒಂದೆಡೆ ತೋರಿಸಿದರೆ ಸಾಮಾಜಿಕ ವಿಘಟನೆಯನ್ನು ಮತ್ತೊಂದೆಡೆಗೆ ತೋರಿಸುತ್ತದೆ. ಇದಲ್ಲದೆ ರಾಜಕೀಯ ಕುತಂತ್ರಗಳು, ಧರ್ಮದ ಒಳ ಸಂಘರ್ಷಗಳು, ಕೌಟುಂಬಿಕ ಬಿಕ್ಕಟ್ಟುಗಳನ್ನು ಮುಖಕ್ಕೆ ರಾಚುವಂತೆ ಮುಂದಿಡುವ ಸಂಪೂರ್ಣ ಹೊಸ ಆವಿಷ್ಕಾರದ ನಾಟಕವಾಗಿದೆ. ಇದರ ಕೆಲವು ಭಾಗಗಳು ರಂಗ ಪ್ರಯೋಗಕ್ಕೆ ಒಳಗಾದಂತೆ ಇವರ ಆತ್ಮಕಥೆ, ಗೌರ್ಮೆಂಟ್ ಬ್ರಾಹ್ಮಣದ ಕೆಲವು ಭಾಗಗಳು ಪ್ರದರ್ಶನಕ್ಕೆ ಒಳಗಾಗಿವೆ. ಮ.ನ. ಜವರಯ್ಯ ಜಲ ನಾಟಕದ ಮೂಲಕ ಎರಡು ಸಾವಿರ ವರ್ಷಗಳಷ್ಟು ಹಳೆಯದಾದ ಬುದ್ಧನಿಗೆ ಸಂಬಂಧಿಸಿದ ಅe್ಞÁತವಾದೊಂದು ಕಥೆಯನ್ನು ಬೆಳಕಿಗೆ ತಂದಿದ್ದಾರೆ. ನೀರಿಗೆ ಸಂಬಂಧಿಸಿದ ವಿಚಾರ ಸರಣಿಯನ್ನು ಪ್ರಸ್ತುತ ನಾಟಕ ಒಳಗೊಂಡಿದೆ. ನೀರಿಗಾಗಿ ಅಂಬೇಡ್ಕರ್ ನಡೆಸಿದ ಹೋರಾಟವನ್ನು ಕುರಿತಂತೆ ಟಿ.ಎಂ.ಭಾಸ್ಕರ್ ನೀರು ಬೇಕು ನೀರು ಎಂಬ ನಾಟಕವನ್ನು ರಚಿಸಿದ್ದಾರೆ. ಭಾಷೆ ಶಿಷ್ಟವೆನಿಸಿದರೂ ಶೈಲಿ, ತಂತ್ರ, ನಿರೂಪಣೆ ಸಮರ್ಥವಾಗಿ ಮೂಡಿ ಬಂದಿದೆ. ಇದಲ್ಲದೆ ಈ ಕ್ಷೇತ್ರದಲ್ಲಿ ಚೆನ್ನಣ್ಣ ವಾಲೀಕಾರ, ಕುಂ.ವೀರಭದ್ರಪ್ಪ ಕೃಷಿ ಮಾಡಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಫಸಲು ಬಾರದೆ ಹೋಗಿದೆ.

	ಇಪ್ಪನೆಯ ಶತಮಾನದ 70ರ ದಶಕದಲ್ಲಿ ಕನ್ನಡ ಸಾಹಿತ್ಯದಲ್ಲಾದ ಬದಲಾವಣೆಗಳು ಹಲವಾರು. ಭಾರೀ ಪ್ರಮಾಣದಲ್ಲಿ ಹೊಸ ವಿಚಾರಗಳ ಅಲೆಯೇ ಕಾಣಿಸಿಕೊಂಡಿತು. ಪಾಶ್ಚಿಮಾತ್ಯ ವಿಚಾರಧಾರೆಗಳಿಗಿಂತ ಸ್ವದೇಶಿ ನೆಲೆಯ ಚಿಂತನಧಾರೆಗಳೇ ಅಧಿಕೃತತೆ ಪಡೆದವು. ಇದರ ಫಲವಾಗಿ ಆರ್ಥಿಕ ಮತ್ತು ಸಾಂಸ್ಕøತಿಕ ಹಿನ್ನೆಲೆಯ ವಿಚಾರಕ್ರಾಂತಿಯನ್ನು ಒಳಗೊಂಡ ಚಿಂತನಶೀಲರು ಸೃಷ್ಟಿಯಾದರು. ಸಾಮಾಜಿಕ ಪ್ರe್ಞÉಯ ಹಿನ್ನೆಲೆಯಲ್ಲಿ ಶೋಷಣೆಯ ಸ್ವರೂಪ, ಸ್ವಭಾವ, ವ್ಯಾಪ್ತಿ ಮೊದಲಾದ ದೃಷ್ಟಿಕೋನಗಳಲ್ಲಿ ಮುಕ್ತ ಮನಸ್ಸಿನ ಚರ್ಚೆ ನಡೆಸಿದರು. ಜಾತಿ ವ್ಯತ್ಯಾಸಗಳ ನೆಲೆಯಲ್ಲಿ ಚಿಂತನಶೀಲತೆ ಒಂದೆಡೆ ಕಂಡುಬಂದರೆ, ಮಾಕ್ರ್ಸ್, ಲೋಹಿಯಾ, ಅಂಬೇಡ್ಕರ್ ವಿಚಾರಧಾರೆಯ ಸಾಹಿತ್ಯವನ್ನು ಇನ್ನೊಂದೆಡೆ ಕಾಣುತ್ತೇವೆ. ಜೊತೆಗೆ ಸೈದ್ಧಾಂತಿಕ ನೆಲೆಯೂ ಗೋಚರವಾಯಿತು. ಒಟ್ಟಾರೆ ಬಹುಮುಖೀ ನೆಲೆಯಲ್ಲಾದ ಬದಲಾವಣೆಯ ಫಲವಾಗಿ ಮೂಡಿದ ವಿಚಾರ ಕ್ರಾಂತಿಯ ಪರಿಣಾಮವಾಗಿ ಹಲವಾರು ವೈಚಾರಿಕ ಕೃತಿಗಳು ಹುಟ್ಟಿಕೊಂಡವು. ಹೊಸ ಅಲೆ (ಸಿ.ಪಿ.ಸಿದ್ಧಾಶ್ರಮ), ದಲಿತಯುಗ ಮತ್ತು ಕನ್ನಡ ಸಾಹಿತ್ಯ, ದಲಿತ ಸಾಹಿತ್ಯ ಚಳವಳಿಯ ತಾತ್ವಿಕ ಚಿಂತನ, ದಲಿತ ಪ್ರe್ಞÉ, ಸಾಹಿತ್ಯ ಮತ್ತು ಸಮಾಜ, ಸಾಂಸ್ಕøತಿಕ ದಂಗೆ, ದಲಿತ ಸಾಹಿತ್ಯ ಪ್ರವೇಶಿಕೆ, (ಅರವಿಂದ ಮಾಲಗತ್ತಿ), ಕರ್ನಾಟಕ ದಲಿತ ಚಳವಳಿ ಮತ್ತು ಅಂಬೇಡ್ಕರ್ (ಚಂಡಾಳ), ದಲಿತ ಲೋಕದೊಳಗೆ (ಎಲ್.ಹನುಮಂತಯ್ಯ), ದಲಿತ ವರ್ಗದ ಶರಣರು ಮತ್ತು ಶರಣೆಯರು (ಮ.ನ.ಜವರಯ್ಯ), ದಲಿತ ಜಗತ್ತು (ಪುರುಷೋತ್ತಮ ಬಿಳಿಮಲೆ), ದಲಿತ ಸಾಹಿತ್ಯ ಮತ್ತು ಇತರ ಲೇಖನಗಳು (ದೇವಯ್ಯ ಹರವೆ), ಹಕ್ಕಿನೋಟ (ಸಿದ್ಧಲಿಂಗಯ್ಯ), ಕನ್ನಡ ದಲಿತ ಸಾಹಿತ್ಯದ ನೆಲೆ (ಜಿ.ಆರ್.ತಿಪ್ಪೇಸ್ವಾಮಿ), ಮತಾಂತರ ಮತ್ತು ಇತರ ಲೇಖನಗಳು (ಮುನಿವೆಂಕಟಪ್ಪ) ಮುಂತಾದ ಕೃತಿಗಳನ್ನು ಸ್ಮರಿಸಬಹುದಾಗಿದೆ. ಪೋಲಂಕಿ ರಾಮಮೂರ್ತಿ, ರಹಮತ್ ತರೀಕೆರೆ, ಎಚ್.ಎಸ್. ರಾಘವೇಂದ್ರರಾವ್, ಕೆ.ಕೇಶವಮೂರ್ತಿ, ಆರ್ಕೆ ಮಣಿಪಾಲ ಮೊದಲಾದವರ ದಲಿತ ಸಾಹಿತ್ಯವನ್ನು ಕುರಿತ ವಿಚಾರ ವಿಮರ್ಶೆ ಚಿಂತನೆಗಳು ದಲಿತ ಚಿಂತನೆ ಹದಗೊಳ್ಳುವಲ್ಲಿ ಸಹಕರಿಸಿವೆ. 

	ಮರಾಠಿ ದಲಿತ ಸಾಹಿತ್ಯದಲ್ಲಿ ಬಂದಿರುವಷ್ಟು ಲೇಖಕರ ಆತ್ಮಕಥೆಗಳು ಕನ್ನಡದಲ್ಲಿ ಬಂದಿಲ್ಲ. ಅಲ್ಲಿಯ ಬರೆಹಗಳಲ್ಲಿ ದಲಿತ ಲೇಖಕರು ವೈಯಕ್ತಿಕ ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಮತಾಂತರ ಮತ್ತು ಇತರ ಲೇಖನಗಳು ಕೃತಿಯಲ್ಲಿ ಮುನಿವೆಂಕಟಪ್ಪ ಅಂತ್ಯಜನ ಆತ್ಮ ಕಥೆ ಎಂಬ ಶೀರ್ಷಿಕೆಯಡಿಯಲ್ಲಿ ಕೆಲವಾರು ಸಂಗತಿಗಳನ್ನು ಪ್ರಸ್ತಾಪಿಸಿದ್ದಾರೆ. ಸಿದ್ಧಲಿಂಗಯ್ಯನವರು ಅವತಾರಗಳು ಕೃತಿಯಲ್ಲಿ ತಮ್ಮ ವೈಯಕ್ತಿಕ ವಿಚಾರಗಳನ್ನು ಹಾಸ್ಯದ ಲೇಪದೊಂದಿಗೆ ಹರಿಯಬಿಟ್ಟಿದ್ದಾರೆ. ಪೂರ್ಣಪ್ರಮಾಣದಲ್ಲಿ ಹೊರ ಬಂದಿರುವ ಆತ್ಮಚರಿತ್ರೆಗಳೆಂದು ಕರೆಸಿಕೊಳ್ಳುವ ಕೃತಿಗಳಿವು. ಅರವಿಂದ ಮಾಲಗತ್ತಿಯವರ ಗೌರ್ಮೆಂಟ್ ಬ್ರಾಹ್ಮಣ, ಸಿದ್ಧಲಿಂಗಯ್ಯನವರ ಊರುಕೇರಿ, ರಾಮಯ್ಯನವರ ಮಣೇಗಾರ, ಗೋವಿಂದರಾಜು ಅವರ ಮನವಿಲ್ಲದವರ ಮಧ್ಯೆ. ಕನ್ನಡದ ಮೊದಲ ದಲಿತ ಆತ್ಮಕಥೆ ಎಂದು ಕರೆಯಿಸಿಕೊಂಡ ಮಾಲಗತ್ತಿಯವರ `ಗೌರ್ಮೆಂಟ್ ಬ್ರಾಹ್ಮಣ ಕವಿತೆ, ಕಾದಂಬರಿಗಳಲ್ಲಿ ಬಳಸಿಕೊಳ್ಳಲಾಗದ ವಿಭಿನ್ನ ಅನುಭವಗಳನ್ನು ಸಹಜವಾಗಿ, ಪ್ರಖರವಾಗಿ ತೆರೆದಿಟ್ಟಿದೆ. 

	ಇದೇ ಸಂದರ್ಭದಲ್ಲಿ ದಲಿತ ಸಾಹಿತ್ಯ ವಿಮರ್ಶೆಯ ಬಗೆಗೆ ಒಂದೆರಡು ಮಾತುಗಳನ್ನು ಹೇಳಬಹುದು. ದಲಿತ ಸಾಹಿತ್ಯ ತನ್ನ ಅಭಿವ್ಯಕ್ತಿ ವಿಧಾನದಲ್ಲಿ ಸರಳ ಸೂತ್ರಗಳನ್ನು ಅನ್ವಯಿಸಿಕೊಂಡಿದ್ದರಿಂದ ಸಾಹಿತ್ಯ ವಾಚ್ಯವಾಗಿದ್ದರಿಂದ ಲೇಖಕರಿಗೂ ಸಾಮಾನ್ಯ ಓದುಗರಿಗೂ ನೇರ ಸಂಪರ್ಕ ಉಂಟಾಯಿತು. ಹಾಗಾಗಿ ವಿಮರ್ಶೆ ಹಾಗೂ ವಿಮರ್ಶಕ ಇಲ್ಲಿ ಮುಖ್ಯವಾಗಲಿಲ್ಲ. ಇದರಿಂದ ದೂರ ಸರಿದ ವಿಮರ್ಶಕರು ದಲಿತ ಸಾಹಿತ್ಯ ಕೃತಿಗಳನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಹಾಗೊಮ್ಮೆ ವಿಮರ್ಶೆಗೆ ಪರಿಗಣಿಸಿದ್ದರೂ ನವ್ಯ ವಿಮರ್ಶೆಯ ಮಾನದಂಡಗಳನ್ನೇ ದಲಿತ ಬಂಡಾಯ ಕೃತಿಗಳೊಂದಿಗೆ ಅನ್ವಯಿಸತೊಡಗಿದ್ದುಂಟು. ಇದರ ಪರಿಣಾಮವಾಗಿ ಕೃತಿಯ ವಸ್ತುನಿಷ್ಠ ಮೌಲ್ಯಮಾಪನಕ್ಕಿಂತ ಸಾರಾಸಗಟಾಗಿ ತಳ್ಳಿಹಾಕುವ ವಿಮರ್ಶೆ ಆರಂಭವಾಯಿತು. ಆಕ್ರೋಶ, ಅಬ್ಬರ, ಸರಳತೆ, ಘೋಷಿತ ಬಂಡಾಯ ಇವೆಲ್ಲ ಸಾಹಿತ್ಯಕ ಮೌಲ್ಯಗಳೇ ಅಲ್ಲ ಎಂಬ ಅಭಿಪ್ರಾಯ ವಿಮರ್ಶೆಯಲ್ಲಿ ವ್ಯಕ್ತವಾಯಿತು. ಕೆಲವು ವಿಮರ್ಶಕರು ದಲಿತ ಸಾಹಿತ್ಯದ ಮೌಲ್ಯಮಾಪನ ಹಾಗೂ ವಿಮರ್ಶೆಗೆ ಪ್ರತ್ಯೇಕ ಮಾನದಂಡಗಳನ್ನೇ, ವಿಮರ್ಶೆಯ ಪರಿಕಲ್ಪನೆಯನ್ನೇ ಹೊಸದಾಗಿ ಕಂಡುಕೊಳ್ಳಬೇಕಾಗಿದೆ ಎಂದೂ ಅಭಿಪ್ರಾಯಪಟ್ಟರು. ಕನ್ನಡ ಸಾಹಿತ್ಯ ಪರಂಪರೆಯ ಮುಖ್ಯ ವಾಹಿನಿಯಲ್ಲಿಯೇ ಬರುವ ದಲಿತ ಸಾಹಿತ್ಯ ವಿಮರ್ಶೆಗೆ ಪ್ರತ್ಯೇಕ ಮಾನದಂಡಗಳ ಅಗತ್ಯತೆಯನ್ನು ಕೆಲವರು ತಳ್ಳಿ ಹಾಕಿದರು. ಈಗಿರುವ ಸಾಹಿತ್ಯಕ ಮಾನದಂಡಗಳಿಂದಲೇ ವಿಮರ್ಶೆ ಸಾಧ್ಯವೆಂದು ಹೇಳಿದರು. ದಲಿತ ಸಾಹಿತ್ಯವನ್ನು ಕುರಿತು ಸಮರ್ಥ ವಿಮರ್ಶೆಗಳು ಈವರೆಗೆ ಬಂದಿಲ್ಲ. ದಲಿತರೇ ವಿಮರ್ಶೆಯ ಕ್ಷೇತ್ರಕ್ಕೆ ಇಳಿದಾಗ ಅರ್ಥೈಸುವಿಕೆ ಮತ್ತು ವ್ಯಾಖ್ಯಾನಗಳೇ ಬದಲಾಗಬಹುದು ಎನ್ನುವ ವಾದವು ಎದುರಾಗಿದೆ. ಈ ಚರ್ಚೆ ಈಗಲೂ ಮುಂದುವರಿದಿದೆ. ಒಟ್ಟಾರೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಸಂದರ್ಭದಲ್ಲಿ ದಲಿತ ಸಾಹಿತ್ಯ ಚಟುವಟಿಕೆಗಳು ನಡೆಯುತ್ತಿವೆ.			   	  						(ಜಿ.ಆರ್.ಟಿ.)

	ಸಾಹಿತ್ಯ ವಿಮರ್ಶೆಯನ್ನು ಪ್ರಸ್ತಾಪಿಸುವಾಗ ಸ್ತ್ರೀವಾದ, ಸ್ತ್ರೀವಾದಿ ಚಳವಳಿ, ಸ್ತ್ರೀವಾದಿ ವಿಮರ್ಶೆಗಳನ್ನು ನಾವು ಮರೆಯುವಂತಿಲ್ಲ. ಸ್ತ್ರೀವಾದಿ ವಿಮರ್ಶೆಯ ಬಗೆಗೆ ಚಿಂತಿಸುವಾಗ ದಲಿತೀಯ ಸ್ತ್ರೀವಾದದ ವಿಚಾರವೂ ಪ್ರಸ್ತಾಪಗೊಳ್ಳುತ್ತದೆ. ದಲಿತ, ಬಂಡಾಯ, ಸ್ತ್ರೀವಾದಿ ಚಳವಳಿಗಳಿಗೆ ಪ್ರಧಾನವಾಗಿರುವ ನೆಲೆ ಸಾಮಾಜಿಕವಾದದ್ದು. ಈ ಸಾಮಾಜಿಕ ನೆಲೆಯಿಂದ ತಾತ್ವಿಕವಾಗಿ ಹೋರಾಡಲು ಈ ವಾದಗಳು ಬಯಸುತ್ತವೆ. ಈ ವಾದಗಳ ಆಶಯ, ಆಲೋಚನೆಗಳಲ್ಲಿ ಹಲವೆಡೆ ಸಮಾನ ಮನಃಸ್ಥಿತಿಗಳನ್ನು ಗುರುತಿಸಲು ಸಾಧ್ಯವಿದೆ.

	ಮಹಿಳೆಯರೆಲ್ಲರೂ ಒಂದೇ ಎಲ್ಲರೂ ಶೋಷಣೆಯ ನೋವುಂಡವರೇ ಎಂಬ ವಿಚಾರಗಳಿದ್ದರೂ ಸ್ತ್ರೀವಾದದಲ್ಲಿ ದಲಿತೀಯ ಸ್ತ್ರೀವಾದ ಸ್ವಲ್ಪ ಭಿನ್ನ ಆಶಯಗಳೊಂದಿಗೆ ತನ್ನ ಪ್ರಸ್ತುತತೆಯನ್ನು ಸ್ಥಾಪಿಸಿಕೊಂಡಿದೆ. ದಲಿತೀಯ ಸ್ತ್ರೀವಾದಕ್ಕೆ ಅರವಿಂದ ಮಾಲಗತ್ತಿಯವರು ಕೊಡುವ ವ್ಯಾಖ್ಯಾನದಲ್ಲಿ ಅದರ ಆಶಯಗಳ ಸ್ಪಷ್ಟ ಅರಿವು ಮೂಡುತ್ತದೆ. ದಲಿತ ಸ್ತ್ರೀವಾದ ಎನ್ನುವುದು ತಮ್ಮನ್ನು ತಾವು ಅರಿಯಲು, ಬೇರೆಯವರನ್ನು ಅರಿತುಕೊಳ್ಳಲು ಹಾಗೂ ತಾವು ರಕ್ಷಿಸಿಕೊಳ್ಳುವುದರೊಂದಿಗೆ, ಬಂಧನದಿಂದ ಬಿಡುಗಡೆಗೊಳ್ಳುತ್ತ ಇತರರನ್ನು ಬಿಡುಗಡೆಗೊಳಿಸುವಲ್ಲಿ ಸಹಕರಿಸುತ್ತ, ತಾನೂ ಬೆಳೆಯುವುದು ಮತ್ತು ಇತರರನ್ನೂ ಬೆಳೆಸುವಂತಹದ್ದಾಗಿದೆ.

	ಸ್ತ್ರೀವಾದಿಗಳು `ಮಹಿಳೆಯರೆಲ್ಲ ಒಂದೇ ಎಂಬ ಧೋರಣೆ ಹೊತ್ತವರಾದರೂ ದಲಿತ ಸ್ತ್ರೀವಾದಿ ಪ್ರe್ಞÉಯ ಅರಿವು ಮತ್ತು ಜಾತಿವಾದಿ ಧೋರಣೆಗಳಿಂದ ಮುಕ್ತ ಮನಃಸ್ಥಿತಿಯನ್ನು ಹೊಂದಬೇಕಾಗಿರುವ ದಿಶೆಯಲ್ಲಿ ದಲಿತ ಸ್ತ್ರೀವಾದಕ್ಕೆ ಒಂದು ಪ್ರತ್ಯೇಕ ಅಧ್ಯಯನದ ನೆಲೆಯ ಆವಶ್ಯಕತೆಯನ್ನು ವಿಮರ್ಶಕರು ಒತ್ತಿ ಹೇಳುತ್ತಾರೆ. ದಲಿತ ಮಹಿಳೆ ದಲಿತತ್ವದ ಹಿನ್ನೆಲೆಯ ಸಮಸ್ಯೆಗಳು ಕೇಂದ್ರವಾಗುವುದರೊಂದಿಗೆ ಒಬ್ಬ ಸಾಮಾನ್ಯ ಮಹಿಳೆಯಾಗಿ ಪ್ರತಿಕ್ರಿಯಿಸುವ ಗುಣ ಕಂಡುಬರುತ್ತದೆ. ಮತ್ತು ದಲಿತ ಮಹಿಳೆಗೆ ದಲಿತ ಪರಿಕಲ್ಪನೆಯ ಒಳಗಡೆಯೇ ಎದುರಿಸುವ ಸಮಸ್ಯೆಗಳು ಇನ್ನೊಂದು ಸ್ವರೂಪದ್ದಾಗಿದೆ.

	ಸುಕನ್ಯಾಮಾರುತಿ, ಮಲ್ಲಿಕಾಘಂಟಿ, ಲಲಿತಾನಾಯಕ, ಧರಣಿದೇವಿ, ಸರಸ್ವತಿ, ಸಮತಾ ದೇಶಮಾನೆ, ಮಿತಾದೇವನೂರು ಹೀಗೆ ಹಲವರು ತಮ್ಮ ವಿಚಾರ, ಬರೆಹ, ಕವನ ಇತ್ಯಾದಿಗಳ ಮೂಲಕ ದಲಿತೀಯ ಚಿಂತನೆಗಳಲ್ಲಿ ಭಾಗಿಯಾಗಿದ್ದಾರೆ. ಸ್ತ್ರೀವಾದ, ದಲಿತ ವಾದಗಳ ಸಹಯೋಗದಿಂದ ಸ್ತ್ರೀಕೇಂದ್ರಿತ ಪರಿಕಲ್ಪನೆಗಳು ಹೊಸ ಮಾರ್ಗ, ಹೊಸ ಜೀವಕಳೆಗಳನ್ನು ಹೊಂದಲು ಸಾಧ್ಯವಿದೆ ಎಂಬ ಅಭಿಪ್ರಾಯಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ.    			      			(ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ